ಅಭಿಪ್ರಾಯ / ಸಲಹೆಗಳು

ಹೋಮಿಯೋಪತಿ

ಪರಿಚಯ:

 

 

ಹೋಮಿಯೋಪತಿಯ ಏಳು ಮುಖ್ಯ ತತ್ವಗಳ ಮೇಲೆ ಆಧಾರಿತವಾಗಿರುವ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿದೆ. ಹೋಮಿಯೋಪತಿಯು ವಿಶ್ವದಾದ್ಯಂತ ಎರಡನೇ ಅತಿಹೆಚ್ಚು ಉಪಯೋಗವಾಗುತ್ತಿರುವ ಚಿಕಿತ್ಸಾ ಪದ್ಧತಿಯಾಗಿದೆ. ಎರಡು ಶತಮಾನಗಳ ಇತಿಹಾಸ ಹೊಂದಿರುವ  ಪದ್ಧತಿಯು ಇತರ ಆಯುಷ್ ವೈದ್ಯ ಪದ್ಧತಿಗೆ ಹೋಲಿಸಿದಲ್ಲಿ  ಇತ್ತೀಚೆಗೆ ಆವಿಷ್ಕರಿಸಿದ ಪದ್ಧತಿಯಾಗಿದೆ. ಜರ್ಮನಿಯ ಡಾ||ಕ್ರಿಶ್ಚಿಯನ್ ಫೆಡ್ರಿಕ್ ಸ್ಯಾಮ್ಯುಯಲ್ ಹಾನಿಮನ್ ರಿಂದ ಹೋಮಿಯೋಪತಿಯು ಕಂಡುಹಿಡಿಯಲ್ಪಟ್ಟಿತು. ಮೂಲತಃ ಹಾನಿಮನ್ ರವರು ಆಲೋಪತಿ ವೈದ್ಯರಾಗಿದ್ದು ಆಗಿನ ಕಾಲದ ಅಲೋಪತಿಯ ಚಿಕಿತ್ಸಾ ಕ್ರಮದ ಬಗ್ಗೆ ಅಸಮಧಾನ ಹೊಂದಿದ್ದರಿಂದ ಅವರು ಚಿಕಿತ್ಸೆ ನೀಡುವುದನ್ನು ತ್ಯಜಿಸಿದರು. ಏಳು ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಅವರು ತಮ್ಮ ಹೊಟ್ಟೆಪಾಡಿಗಾಗಿ ವೈದ್ಯಕೀಯ ಹಾಗೂ ವಿಜ್ಞಾನದ ಪುಸ್ತಕಗಳನ್ನು ಭಾಷಾಂತರಿಸತೊಡಗಿದರು. ಸ್ಕಾಟಿಷ್ ಮೂಲದವರಾದ ವಿಲಿಯಂ ಕಲ್ಲೆನ್ಸರು ಔಷಧೀಯ ಗುಣ ಧರ್ಮಗಳ ಬಗ್ಗೆ ಬರೆದ ಮೆಟೀರಿಯಾ ಮೆಡಿಕಾ ಪುಸ್ತಕವನ್ನು ಭಾಷಾಂತರಿಸುತ್ತಿದ್ದಾಗ ಸಿಂಕೋನ ಮರದ ತೊಗಟೆಯಿಂದ ಮಲೇರಿಯಾ ತರಹದ ರೋಗ ಲಕ್ಷಣಗಳು ಉಂಟಾಗುವುದು ಎಂಬ ವ್ಯಾಕ್ಯವನ್ನು ಓದಿದರು. ಆದರೆ ಸುಮ್ಮನೆ ಅದನ್ನು ಒಪ್ಪಿಕೊಳ್ಳದೇ ಪ್ರಯೋಗಮಾಡಿ ನೋಡಬೇಕೆಂದು ಅವರ ವೈಜ್ಞಾನಿಕ ಮನೋಭಾವ ಅವರನ್ನು ಪ್ರೇರೇಪಿಸಿತು. ಅದರಂತೆ ಸಿಂಕೋನಾ ಮರದ ತೊಗಟೆಯ ಕಷಾಯವನ್ನು ಸ್ವತಃ ಅವರೇ ಸೇವಿಸಿ ನೋಡಲಾಗಿ ಆಶ್ಚರ್ಯವೆಂಬಂತೆ ಮಲೇರಿಯಾದ ಲಕ್ಷಣಗಳು ಅವರಲ್ಲಿ ಕಾಣಿಸಿಕೊಂಡಿತು. ಈ ಘಟನೆಯು ಅವರನ್ನು ಇನ್ನಷ್ಟು ಪ್ರಯೋಗಗಳನ್ನು ಅವರ ಮೇಲೆ ಹಾಗೂ ಇತರರ ಮೇಲೂ ಮಾಡಿ ನೋಡಲು ಪ್ರೇರೇಪಿಸಿತು. ಈ ಘಟನೆಯೇ ಹೋಮಿಯೋಪತಿ ವೈದ್ಯಪದ್ಧತಿಯ ಆವಿಷ್ಕಾರವಾಗಲು ಕಾರಣವಾಯಿತು. ಈ ಪ್ರಯೋಗಗಳ ಫಲಿತಾಂಶವಾಗಿ 1796ರಲ್ಲಿ ಹಾನಿಮನ್‌ರು ‘ಸಿಮಿಲಿಯಾ ಸಿಮಿಲಿಬಸ್ ಕ್ಯುರೆಂಟರ್’ ಅಂದರೆ ಸಮ ಸಮವನ್ನು ವಾಸಿಮಾಡುತ್ತದೆ ಎಂಬ ತತ್ವದ ಮೇಲೆ ಆಧಾರಿತವಾದ ಹೋಮಿಯೋಪತಿ ವೈದ್ಯಶಾಸ್ತ್ರವನ್ನು ಕಂಡುಹಿಡಿದು ಜಗತ್ತಿಗೆ ಪ್ರಪ್ರಥಮವಾಗಿ ಪರಿಚಯಿಸಿದರು. ಅಲ್ಲಿಂದ ಮುಂದೆ ಅನೇಕ ವರ್ಷಗಳವರೆಗೆ ನಾನಾ ಪ್ರಯೋಗಗಳನ್ನು ಮುಂದುವರೆಸಿ ಹೋಮಿಯೋಪತಿ ವೈದ್ಯಶಾಸ್ತ್ರವನ್ನು ಇನ್ನಷ್ಟು ಉಜ್ವಲಗೊಳಿಸಿ ಅದರ ತತ್ವಗಳನ್ನು ಇನ್ನೂ ಭದ್ರ ಹಾಗೂ ಒರೆಹಚ್ಚಿ ಸಿದ್ದಗೊಳಿಸಿ ಒಂದು ಪರಿಪೂರ್ಣ ಚಿಕಿತ್ಸಾ ಪದ್ಧತಿಯಾಗಿ ಬೆಳೆಸಿದರು.

 

ಹೋಮಿಯೋಪತಿ ವೈದ್ಯಪದ್ಧತಿಯು ‘ಸಿಮಿಲಿಯಾ ಸಿಮಿಲಿಬಸ್ ಕ್ಯುರೆಂಟರ್’ ಎಂಬ ತತ್ವದ ಮೇಲೆ ಆಧಾರಿತವಾಗಿದೆ, ಅಂದರೆ  ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಎಂಬಂತೆ ಎಂದು ಹೇಳಬಹುದು. ಇದರ ಅರ್ಥ ಒಬ್ಬ ವ್ಯಕ್ತಿಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಬೇಕಾದರೆ ಅದೇ ರೋಗ ಲಕ್ಷಣಗಳನ್ನು ಉಂಟುಮಾಡಬಲ್ಲ ಔಷಧಿಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ರೋಗ ಸಂಪೂರ್ಣ ಗುಣವಾಗುತ್ತದೆ ಎಂದು. ಹಾಗಾಗಿ “ಹೋಮಿಯೋಪತಿ” ಎಂಬ ಶಬ್ದವು ಗ್ರೀಕ್ ಶಬ್ಧಗಳಾದ “ಹೊಮೊಯಿಸ್” ಮತ್ತು “ಪ್ಯಾಥೋಸ್” ಎಂಬ ಎರಡು ಶಬ್ದಗಳಿಂದ ಉದಯಿಸಿತು ‘ಹೊಮೊಯಿಸ್’ ಅಂದರೆ ‘ಒಂದೇ ತರಹದ’ ಎಂಬ ಅರ್ಥವೂ ಹಾಗೂ ‘ಪ್ಯಾಥೋಸ್’ ಅಂದರೆ ‘ರೋಗ ಲಕ್ಷಣ’ ಎಂದೂ ಅರ್ಥ. ಹೋಮಿಯೋಪತಿಯ ಇನ್ನೊಂದು ವಿಶೇಷತೆ ಏನೆಂದರೆ ವೈಯುಕ್ತಿಕ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಚಿಕಿತ್ಸೆ ನೀಡುವುದಾಗಿದೆ. ಇದರಲ್ಲಿ ಒಬ್ಬ ರೋಗಿಯ ರೋಗ ಲಕ್ಷಣಗಳಲ್ಲದೇ ಅವನ ಸಂಪೂರ್ಣ ಮಾನಸಿಕ ದೈಹಿಕ ವ್ಯಕ್ತಿತ್ವವನ್ನು ಕ್ರೂಢೀಕರಿಸಿ ಆ ಒಟ್ಟಾರೆ ಲಕ್ಷಣಗಳಿಗೆ ಸೂಕ್ತವಾಗುವಂತಹ ಔಷಧಿಯನ್ನು ಆರಿಸಿ ತೆಗೆದು ಚಿಕಿತ್ಸೆ ನೀಡುವುದಾಗಿದೆ. ಉದಾಹರಣೆಗೆ ಇಬ್ಬರು ವ್ಯಕ್ತಿಗಳು ಒಂದೇ ತರಹದ ರೋಗದಿಂದ ಬಳಲುತ್ತಿದ್ದರೂ ಅವರ ವ್ಯಕ್ತಿತ್ವಗಳು ಬೇರೆ ಬೇರೆ ಇರುತ್ತವೆ ಅಲ್ಲದೇ ಒಂದೇ ಹೆಸರಿನ ರೋಗವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿ ಗೋಚರಿಸುತ್ತದೆ. ಆದ್ದರಿಂದ  ವೈಯಕ್ತಿಕ ಲಕ್ಷಣಗಳಿಗನುಸಾರವಾಗಿ ಪ್ರತಿಯೊಬ್ಬರಿಗೂ ಸೂಕ್ತವಾದ ಬೇರೆ ಬೇರೆ ಔಷಧಿಗಳಿಂದ ಉಪಚರಿಸಬೇಕಾಗಿರುತ್ತದೆ. ಹೋಮಿಯೋಪತಿಯು ಮುಖ್ಯವಾಗಿ ಸಪ್ತ ಸೂತ್ರಗಳೆಂಬಂತಹ ತತ್ವಗಳ ಮೇಲೆ ಆಧಾರಿತವಾಗಿದ್ದು ಅವುಗಳು ಯಾವುವೆಂದರೆ ʼಲಾ ಆಫ್ ಸಿಮಿಲಿಯಾ’ ಅಂದರೆ ‘ಸಮದಿಂದ ಸಮವನ್ನು ಹೋಗಲಾಡಿಸುವುದು’ ‘ಲಾ ಆಫ್ ಸಿಂಪ್ಲೆಕ್ಸ್’ ಮತ್ತು ಮಿನಿಮಂ ಡೋಸ್ ಅಂದರೆ ಒಂದು ಬಾರಿಗೆ ಒಂದೇ ಔಷಧವನ್ನು ಅಲ್ಪ ಪ್ರಮಾಣದಲ್ಲಿ ಕೊಡುವುದು ‘ಡಾಕ್ಟ್ರಿನ್ ಆಫ್ ಡ್ರಗ್ ಪ್ರೋವಿಂಗ್’ ಅಂದರೆ ಔಷಧಿಗಳನ್ನು ಆರೋಗ್ಯವಂತ ಮನುಷ್ಯರ ಮೇಲೆ ಪ್ರಯೋಗಿಸಿ ಅವುಗಳ ಪ್ರಯೋಗದಿಂದುಟಾಗುವ ರೋಗ ಲಕ್ಷಣಗಳನ್ನು ಕ್ರೂಢೀಕರಿಸಿ ‘ಮೆಟೇರಿಯಾ ಮೆಡಿಕಾ’ ಎಂಬ ಪುಸ್ತಕದಲ್ಲಿ ಬರೆದಿಡುವುದು.   ‘ಡಾಕ್ಟ್ರಿನ್ ಆಫ್ ಡ್ರಗ್ ಡೈನಮೈಜೇ಼ಷನ್’ ಅಂದರೆ ಔಷಧಿಗಳನ್ನು ತಯಾರಿಸುವಾಗ ಅವುಗಳನ್ನು ತಿಳಿಗೊಳಿಸುತ್ತಾ ಹೋಗಿ ಸೂಕ್ಮ ರೂಪಕ್ಕೆ ತಲುಪುವುದು. ‘ಥಿಯರಿ ಆಫ್ ವೈಟಲ್ ಫೋರ್ಸ್ ‘ಅಂದರೆ ಮನುಷ್ಯನ ಇಡೀ ಶರೀರದ ಕಾರ್ಯಗಳನ್ನು ನಿಯಂತ್ರಿಸುವ ಶಕ್ತಿ ಆತ್ಮ ಎಂದು ಅದರ ಬಗ್ಗೆ ತಿಳುವಳಿಕೆ, ‘ಥಿಯರಿ ಆಫ್ ಕ್ರೋನಿಕ್ ಡಿಸೀಸ್ ‘ಅಂದರೆ ಧೀರ್ಘಕಾಲಿಕ ರೋಗಗಳ ಬಗ್ಗೆ ಅವುಗಳ ಉದಯ ಹಾಗೂ ನಿಯಂತ್ರಣದ ಬಗ್ಗೆ ತಿಳುವಳಿಕೆ. 

 

ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ‘ಆರೋಗ್ಯ’ ಎಂದರೆ ನಮ್ಮ ಶರೀರದ ಎಲ್ಲಾ ಭಾಗದಲ್ಲಿ ಸಮನಾದ ನಿಯಮಿತವಾದ ಒಂದು ಪ್ರಮುಖ ಶಕ್ತಿಯ ‘ವೈಟಲ್ ಫೊರ್ಸ್ ಸಂಚಲನವಾಗುತ್ತಿರುವುದು. ಹಾಗೆಯೇ ಅನಾರೋಗ್ಯ ಎಂದರೆ ಈ ಪ್ರಮುಖ ಶಕ್ತಿಯ ಹರಿಯುವಿಕೆಯಲ್ಲಿನ ಅಡಚಣೆಗಳು. ಈ ಪ್ರಮುಖ ಶಕ್ತಿಯ ಹರಿಯುವಿಕೆ ಸಮಾನ ರೀತಿಯಲ್ಲಿ ಆಗಬೇಕಾದರೆ ಔಷಧವೂ ಕೂಡ ಶಕ್ತಿಯ ರೂಪದಲ್ಲಿರಬೇಕು. ಹಾಗಾಗಿ ಪ್ರತೀ ಔಷಧದಲ್ಲೂ ಒಂದು ಅಂತರ್ ಶಕ್ತಿಯು ಅಡಗಿರುತ್ತದೆ. ಈ ಶಕ್ತಿಯನ್ನು ಹೊರಗೆ ತರಲು ‘ಡ್ರಗ್ ಡೈನಮೈಜೇ಼ಷನ್ ಎಂಬ ಪ್ರಕ್ರಿಯೆಯಿಂದ ‘ಟ್ರಿಚುರೇಷನ್’ ಅಂದರೆ ಸತ್ವಯುತ ಚೂರ್ಣ ತಯಾರಿಸುವುದು ಹಾಗೂ ಸಕ್ಕಷನ್ ಅಂದರೆ ಕುಲುಕಿ ದ್ರವರೂಪದ ಸತ್ವಯುತ ಔಷಧ ತಯಾರಿಸುವುದು ಎಂಬ ಕ್ರಿಯೆಯನ್ನು ಬಳಸಿ ಪ್ರತಿ ಔಷಧಗಳಲ್ಲಿನ ಶಕ್ತಿಯನ್ನು ಹೊರತೆಗೆಯಲಾಗುತ್ತದೆ.

 

  ಹೋಮಿಯೋಪತಿ ಔಷಧಿಗಳನ್ನು ಸಸ್ಯವರ್ಗದಿಂದ, ಪ್ರಾಣಿವರ್ಗದಿಂದ, ಅನೇಕ ಖನಿಜ ಲವಣಗಳಿಂದ, ರೋಗ್ಯವಂತ ಶರೀರದ ಅಂಶಗಳಿಂದ (ಸಾರ್ಕೋಡುಗಳು), ರೋಗ ಗ್ರಸ್ಥ ಶರೀರದಂಶಗಳಿಂದ (ನೋಸೋಡುಗಳು) ಅಲ್ಲದೇ ಪ್ರಾಕೃತಿಕ ಚೈತನ್ಯಗಳಾದ ಆಯಸ್ಕಾಂತ ಕ್ಷಕಿರಣ ಮುಂತಾದ ಮೂಲಗಳಿಂದ ತಯಾರಿಸಲಾಗುತ್ತದೆ. ಈ ಮೂಲಗಳಿಂದ ಸಂಗ್ರಹಿಸಿ ವಿಶೇಷ ತಯಾರಿಕಾ ಕ್ರಮಗಳಿಂದ ಅವುಗಳನ್ನು ತಿಳಿಗೊಳಿಸಿ ಔಷಧೀಯ ಅಂಶಗಳನ್ನು ಕಡಿಮೆಗೊಳಿಸಿ ಅವುಗಳ ಗುಣಮಟ್ಟವನ್ನು ಹೆಚ್ಚಿಸಿ ಅಂದರೆ ಸತ್ವಯುತಗೊಳಿಸಿ ದ್ರವ, ಗುಳಿಗೆ, ಚೂರ್ಣ ಮತ್ತು ಮಾತ್ರೆಗಳ ರೂಪದಲ್ಲಿ ರೋಗಿಗಳಿಗೆ ನೀಡಲು ಬಳಸುತ್ತಾರೆ. ಹೀಗೆ ಔಷಧೀಯ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಔಷಧೀಯ ಅಡ್ಡ ಪರಿಣಾಮಗಳ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ.

 

ಹೋಮಿಯೋಪತಿ ಔಷಧಿಗಳನ್ನು ನವಜಾತ ಶಿಶುವಿನಿಂದ ಹಿಡಿದು ಎಲ್ಲಾ ವಯೋವೃದ್ದರು ಸೇವಿಸಬಹುದು. ಗರ್ಭಿಣಿಯರು ನಿಯಮಿತವಾಗಿ ಔಷಧಿಗಳನ್ನು ಬಳಸಿದರೆ ಹೆರಿಗೆಯು ಸಲೀಸಾಗಿ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಶೀಘ್ರಗುಣ ಹೊಂದುವ ಹಾಗೂ ಧೀಘ್ರಕಾಲಿಕ ಎರಡು ತೆರನಾದ ರೋಗಗಳಲ್ಲಿ ಹೋಮಿಯೋಪತಿಯ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳಾದ ವಾಂತಿ, ಭೇದಿ, ಜ್ವರ, ನ್ಯೂಮೋನಿಯಾ, ದಡಾರ ಮುಂತಾದ ಸೋಂಕುಗಳಿಗೆ ಅತ್ಯತ್ತಮ ಚಿಕಿತ್ಸೆ ಹೋಮಿಯೋಪತಿಯಲ್ಲಿ ಲಭ್ಯವಿದೆ. ಮಕ್ಕಳಲ್ಲಿ ಕಿರಿಕಿರಿ, ರಚ್ಚೆ ಹಿಡಿಯುವುದು, ನಿದ್ರಾ ಹೀನತೆ, ಏಡಿಹೆಚ್ ಡಿ(ADHD), ಆಟಿಸಂ ಅತಿಯಾಗಿ ಉದ್ವೇಗಗೊಳ್ಳುವುದು, ಬುದ್ದಿ ಮಾಂದ್ಯ ಮುಂತಾದ ಮಾನಸಿಕ ರೋಗಗಳಿಗೆ ದೈಹಿಕ ಬೆಳವಣಿಗೆ ಕುಂಟಿತಗೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೆ ಹೋಮಿಯೋಪತಿಯಲ್ಲಿ ಚಿಕಿತ್ಸೆ ಲಭ್ಯವಿದೆ. 

 

ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಶತಮಾನಗಳಿಂದ ಕಾಲ ಕಾಲಕ್ಕೆ ಹೋಮಿಯೋಪತಿಯ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ. ಈ ಹಿಂದೆ ಮಾತ್ರವಲ್ಲ ಈಗಲೂ ಯಾವುದೇ ಹೊಸ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಯಶಸ್ವಿ ಚಿಕಿತ್ಸೆ ಹಾಗೂ ರೋಗ ತಡೆಗಟ್ಟಲು ಮುಂಜಾಗ್ರತಾ ಚಿಕಿತ್ಸೆಯಲ್ಲಿ ಹೋಮಿಯೋಪತಿಯೇ ಮೊದಲ ಆದ್ಯತೆ ಆಗಿರುತ್ತದೆ. ಕೋವಿಡ್-19 ಸ್ಪಾನಿಷ್ ಫ್ಲೂ, ಡೆಂಗ್ಯೂ, ಚಿಕನ್ ಗುನ್ಯಾ, ಹೆಚ್-1 ಎನ್-1, ಪ್ಲೇಗ್, ಜರ್ಮನ್ ಎನ್ಸೆಫೆಲೈಟಿಸ್ ಈ ಎಲ್ಲಾ ತರಹದ ಸೋಂಕು ರೋಗ ಹರಡಿದ ಸಂದರ್ಭಗಳಲ್ಲಿ ಹೋಮಿಯೋಪತಿಯ ಯಶಸ್ವಿ ಬಳಕೆಯಾಗಿರುತ್ತದೆ.

 

ಸ್ರೀಯರ ಸಮಸ್ಯೆಗಳಾದ ಮುಟ್ಟಿನ ತೊಂದರೆಗಳು, ಗರ್ಭಕೋಶದ ಗಡ್ಡೆಗಳು, ಅಂಡಾಶಯದ ಸಮಸ್ಯೆಗಳು, ಮುಂತಾದವುಗಳಿಗೆ ಹೋಮಿಯೋಪತಿಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದೆ. ತಾಯಿ ಮಗುವಿನ ಸಮಸ್ಯೆಗಳು ಹಾಗೂ ಮರಣ ಸಂಭವ ಸಾಧ್ಯತೆಯ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಹೋಮಿಯೋಪತಿಯ ಪಾತ್ರವಿದೆ.

 

ರೋಗ ನಿರೋಧಕ ಶಕ್ತಿಯನ್ನು ಉದ್ಧೀಪನಗೊಳಿಸುವ ಶಕ್ತಿಯು ಹೋಮಿಯೋಪತಿ ಚಿಕಿತ್ಸೆಗೆ ಇರುವುದರಿಂದ ವಾತರೋಗ, ಆಸ್ತಮಾದಂತಹ ರೋಗಗಳಿಗೂ, ಜೀವನ ಶೈಲಿ ಸಂಬಂಧದ ರೋಗಗಳಾದ ಮಧುಮೇಹ, ಏರು ರಕ್ತದೊತ್ತಡ, ಸ್ಥೂಲಕಾಯ, ಇತರ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವೆಂದೆನಿಸುವ ರೋಗಗಳಾದ ಮೂತ್ರಪಿಂಡಗಳ ಕಲ್ಲುಗಳು, ಗರ್ಭಾಶಯದ ಗಡ್ಡೆಗಳು, ಮೂಲವ್ಯಾದಿ ಇವುಗಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆಯೇ ಕೇವಲ ಔಷಧೋಪಚಾರಗಳಿಂದ ಗುಣಪಡಿಸಬಹುದು. ಮನೋರೋಗಗಳಾದ   ಓಸಿಡಿ, ಮನೋವ್ಯಾಕುಲತೆ ಇತ್ಯಾದಿಗಳಿಗೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಗ್ಯಾಸ್ಟ್ರಿಕ್, ಥೈರೋಯ್ಡ್, ಹೃದಯ ಸಂಬಂಧಿ ರೋಗಗಳು ವೃದ್ಧಾಪ್ಯದ ರೋಗಗಳಿಗೂ ಸೂಕ್ತ ಚಿಕಿತ್ಸೆ ದೊರೆಯುವುದು.

 

ಹೋಮಿಯೋಪತಿಯ ಔಷಧಗಳಲ್ಲಿ ಮೂಲ ಕಚ್ಚಾವಸ್ತುಗಳನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸುವುದರಿಂದ ಇತರ ಪದ್ಧತಿಗಳಿಗೆ ಹೋಲಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಔಷಧಗಳು ದೊರೆಯುವುದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಖಂಡಿತಾ ಉತ್ತಮ ಪರಿಣಾಮ ಬೀರಬಲ್ಲದು. ಅಲ್ಲದೇ ಔಷಧ ಸಂಪನ್ಮೂಲದ ಬಳಕೆಯು ತಂಬಾ ಕಡಿಮೆಯಾಗುತ್ತದೆ. ಭಾರತವು ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರವಾಗಿರುವುದರಿಂದ ನಮ್ಮ ದೇಶದ ಆರ್ಥಿಕತೆಗೆ ಹೋಮಿಯೋಪತಿಯು ಸಹಕಾರಿಯಾಗಿದೆ. 

 

ಜರ್ಮನಿ ದೇಶದಲ್ಲಿ ಪ್ರಾರಂಭವಾದ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಡಾ||ಹಾನಿಗ್ಬೆರ್ಗರ್ ಎಂಬ ಫ್ರೆಂಚ್ ವೈದ್ಯರು ಭಾರತಕ್ಕೆ ತಂದರು. 1829-30ರ ಸುಮಾರಿಗೆ ಆಗ ಭಾರತದಲ್ಲಿದ್ದ ಈಗಿನ ಲಾಹೋರ್ ಗೆ ಅವರು ಬಂದರು. ಪಂಜಾಬ್ ನ ಮಹಾರಾಜರಾದ ರಣಜೀತ್ ಸಿಂಗ್ ರವರ ಪಾಶ್ವವಾಯು ರೋಗಕ್ಕೆ ಡಾ||ಹಾನಿಗ್ಬೆರ್ಗರ್ ರವರು ಹೋಮಿಯೋಪತಿ ಚಿಕಿತ್ಸೆ ನೀಡಿ ಗುಣಪಡಿಸಿದರು. ಇದರಿಂದಾಗಿ ಹೋಮಿಯೋಪತಿ ವೈದ್ಯ ಪದ್ಧತಿಯು ಪ್ರಖ್ಯಾತಗೊಂಡಿತು ಡಾ||ಮಹೇಂದ್ರ ಲಾಲ್ ಸರ್ಕಾರ್ ರವರು ಭಾರತದಲ್ಲಿ ಮೊಟ್ಟ ಮೊದಲು ಹೋಮಿಯೋಪತಿ ವಿದ್ಯಾರ್ಹತೆ ಹೊಂದಿದ್ದರು. ಇವರು ಬಂಗಾಳ ರಾಜ್ಯದವರಾಗಿದ್ದು ಅಲ್ಲಿನ ಪ್ರಸಿದ್ಧ ವ್ಯಕ್ತಿಗಳಾದ ಪಂಡಿತ್ ಈಶ್ವರ್ ಚಂದ್ರ ವಿದ್ಯಾಸಾಗರ್, ಮಹಾರಾಜ ರಾಧಾಕಾಂತ್ ದೇವ್ ಬಹದ್ಧೂರ್ ಮುಂತಾದವರಿಗೆ ಹೋಮಿಯೋಪತಿ ಚಿಕಿತ್ಸೆ ನೀಡುವ ಮೂಲಕ ಹೋಮಿಯೋಪತಿಯನ್ನು ಗೌರವಯುತವಾಗಿ ಇನ್ನಷ್ಟು ಬೆಳೆಯುವಂತೆ ಮಾಡಿದರು. ನಂತರ ಬಹಳಷ್ಟು ಜನ ಹೋಮಿಯೋಪತಿ ಚಿಕಿತ್ಸೆಯ ಉಪಯೋಗ ಪಡೆದುಕೊಳ್ಳಲು ಪ್ರಾರಂಭಿಸಿದರು. 1943ರಲ್ಲಿ ಬಂಗಾಳವು ‘ಹೋಮಿಯೋಪತಿ ಸ್ಟೇಟ್ ಫ್ಯಾಕಲ್ಟಿ’ಯನ್ನು ಮೊದಲಿಗೆ ಪ್ರಾರಂಭಿಸಿತು. ನಂತರ ಭಾರತ ಸರ್ಕಾರವು ಹೋಮಿಯೋಪತಿಗೆ ಮನ್ನಣೆ ನೀಡಿತು.

 

ರೆವರೆಂಡ್ ಫಾದರ್ ಅಗಸ್ಟಸ್ ಮುಲ್ಲರ್ ರವರು ಜರ್ಮನಿಯಿಂದ 1878ರಲ್ಲಿ ಕರ್ನಾಟಕದ ಮಂಗಳೂರಿಗೆ ಬಂದು ಬಡವರಿಗಾಗಿ 1888ರಲ್ಲಿ ಒಂದು ಚಾರಿಟೇಬಲ್ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಮತ್ತು ಸುಸೂತ್ರವಾಗಿ ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡಲಾರಂಭಿಸಿದರು. ಇದರಿಂದಾಗಿ ಹೋಮಿಯೋಪತಿಯು ಪ್ರಸಿದ್ಧಿ ಪಡೆದು ಜನಾನುರಾಗಿ ಪದ್ಧತಿಯಾಗಿ ಕರ್ನಾಟಕದಲ್ಲಿ ನೆಲೆಗೊಂಡಿತು. 

 

 

ಇತ್ತೀಚಿನ ನವೀಕರಣ​ : 24-09-2020 04:55 PM ಅನುಮೋದಕರು: AYUSH Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಯುಷ್ ಇಲಾಖೆ (ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080